ಮಂಗಳೂರು ರೈಲ್ವೆ ವ್ಯಾಪ್ತಿಯಲ್ಲಿ ಮಹತ್ವದ ಬದಲಾವಣೆ: ಮೈಸೂರು ವಿಭಾಗಕ್ಕೆ ಸೇರ್ಪಡೆ

ಮಂಗಳೂರು: ಕರಾವಳಿ ಕರ್ನಾಟಕದ ರೈಲ್ವೆ ಆಡಳಿತದಲ್ಲಿ ಮಹತ್ವದ ಬದಲಾವಣೆಗೆ ರೈಲ್ವೆ ಮಂಡಳಿ ಅಧಿಕೃತವಾಗಿ ಒಪ್ಪಿಗೆ ನೀಡಿದೆ. ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲ್ವೆ ಪ್ರದೇಶವನ್ನು ಇನ್ನು ಮುಂದೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಅಡಿಗೆ ತರಲು ನಿರ್ಧರಿಸಲಾಗಿದೆ.

ರೈಲ್ವೆ ಮಂಡಳಿಯ ಈ ಹೊಸ ವ್ಯವಸ್ಥೆ 2026ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಇದರೊಂದಿಗೆ ಮಂಗಳೂರು ಪ್ರದೇಶದ ರೈಲ್ವೆ ಆಡಳಿತಾತ್ಮಕ ವ್ಯಾಪ್ತಿಯಲ್ಲಿ ಪ್ರಮುಖ ಬದಲಾವಣೆ ಸಂಭವಿಸಲಿದೆ.

ಹೊಸ ವ್ಯವಸ್ಥೆಯ ಪ್ರಕಾರ, ಉಳ್ಳಾಲ ಸೇರಿದಂತೆ ಮಂಗಳೂರು ಪ್ರದೇಶ ಪಾಲಕ್ಕಾಡ್ ವಿಭಾಗದಿಂದ ಹೊರಬಂದು ನೈಋತ್ಯ ರೈಲ್ವೆಯ ಮೈಸೂರು ವಿಭಾಗದೊಂದಿಗೆ ಸೇರ್ಪಡೆಯಾಗಲಿದೆ. ಇದರಿಂದ ನೈಋತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆ ನಡುವಿನ ರೈಲುಗಳ ಹಸ್ತಾಂತರ ಕೇಂದ್ರವೂ ಬದಲಾಗಲಿದೆ. ಪ್ರಸ್ತುತ ಪಡೀಲ್‌ನಲ್ಲಿ ಇರುವ ಇಂಟರ್‌ಚೇಂಜ್ ಪಾಯಿಂಟ್ ಮುಂದೆ ಉಳ್ಳಾಲಕ್ಕೆ ಸ್ಥಳಾಂತರಗೊಳ್ಳಲಿದೆ.

ಇದೇ ವೇಳೆ, ಕೊಂಕಣ ರೈಲ್ವೆಯ ವ್ಯಾಪ್ತಿಯಲ್ಲಿರುವ ತೋಕೂರು ರೈಲು ನಿಲ್ದಾಣದ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅದು ಮುಂದಿನ ದಿನಗಳಲ್ಲಿಯೂ ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಆಗಿ ಕಾರ್ಯನಿರ್ವಹಿಸಲಿದೆ.

ಸಿಬ್ಬಂದಿಗೂ ಆಯ್ಕೆಯ ಅವಕಾಶ

ವ್ಯಾಪ್ತಿ ಬದಲಾವಣೆಯ ಪರಿಣಾಮ ರೈಲ್ವೆ ಸಿಬ್ಬಂದಿಯ ಮೇಲೂ ಬೀಳಲಿದೆ. ಗೆಜೆಟೆಡ್ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುತ್ತದೆ.

ನಾನ್-ಗೆಜೆಟೆಡ್ ಸಿಬ್ಬಂದಿಯನ್ನು ಅವರ ಪ್ರಸ್ತುತ ಹುದ್ದೆಗಳೊಂದಿಗೆ ‘ಇದ್ದ ಸ್ಥಿತಿಯಲ್ಲೇ’ ಹೊಸ ವ್ಯವಸ್ಥೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ. ಆದರೆ ಸಿಬ್ಬಂದಿಗೆ ದಕ್ಷಿಣ ರೈಲ್ವೆಯಲ್ಲೇ ಮುಂದುವರಿಯಬೇಕೇ ಅಥವಾ ನೈಋತ್ಯ ರೈಲ್ವೆಗೆ ಸೇರಬೇಕೇ ಎಂಬ ಆಯ್ಕೆಯನ್ನೂ ನೀಡಲಾಗುತ್ತದೆ.

ನೈಋತ್ಯ ರೈಲ್ವೆಯನ್ನು ಆಯ್ಕೆ ಮಾಡುವ ಸಿಬ್ಬಂದಿಯನ್ನು ಆಡಳಿತಾತ್ಮಕ ಪ್ರಕ್ರಿಯೆಯ ಮೂಲಕ ವರ್ಗಾಯಿಸಲಾಗುತ್ತದೆ. ಅವರ ಪ್ರಸ್ತುತ ಗ್ರೇಡ್‌ನಲ್ಲಿ ಸಲ್ಲಿಸಿರುವ ಸೇವಾವಧಿಯನ್ನು ಪರಿಗಣಿಸಿ ಜ್ಯೇಷ್ಠತೆಯನ್ನು ನಿರ್ಧರಿಸಲಾಗುತ್ತದೆ.

ಅಕ್ಟೋಬರ್ 1ರ ಜಾರಿಗೆ ಮುನ್ನ ಸಿಬ್ಬಂದಿ ವರ್ಗಾವಣೆ, ಹುದ್ದೆಗಳ ಹಸ್ತಾಂತರ, ಆಯ್ಕೆ ಪ್ರಕ್ರಿಯೆ ಹಾಗೂ ಕಂಟ್ರೋಲ್ ಬೋರ್ಡ್‌ಗಳ ಬದಲಾವಣೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ರೈಲ್ವೆ ಮಂಡಳಿ ಸಂಬಂಧಪಟ್ಟ ವಲಯಗಳಿಗೆ ಸೂಚನೆ ನೀಡಿದೆ.

ಮಂಗಳೂರು ರೈಲ್ವೆ ವ್ಯಾಪ್ತಿಯ ಈ ಬದಲಾವಣೆಯು ಕರಾವಳಿ ಭಾಗದ ರೈಲುಗಳ ಆಡಳಿತ ಮತ್ತು ನಿರ್ವಹಣೆಯಲ್ಲಿ ಹೊಸ ವ್ಯವಸ್ಥೆಗೆ ಕಾರಣವಾಗಲಿದೆ.